ಕುಂಬಳೆಯಲ್ಲಿ ಬಸ್ ಬ್ಯಾಟರಿ ಕಳವು: ಲಾರಿ ಬ್ಯಾಟರಿ ಕಳವು ಪ್ರಕರಣದ ಆರೋಪಿಗಳ ಮೇಲೆ ಕಣ್ಣಿಟ್ಟ ಪೊಲೀಸರು

ಕುಂಬಳೆ: ಕುಂಬಳೆ-ಬದಿಯಡ್ಕ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‌ನ ಬ್ಯಾಟರಿಯನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಮಹಾಲಕ್ಷ್ಮಿ ಬಸ್ ನಿನ್ನೆ ರಾತ್ರಿ ಸರ್ವೀಸ್ ಮುಗಿಸಿದ ಬಳಿಕ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಇಂದು ಬೆಳಗ್ಗೆ ಚಾಲಕ ದಿನೇಶ್ ಬಂದು ಬಸ್ ಸ್ಟಾರ್ಟ್ ಮಾಡಲು ಪ್ರಯತ್ನಿಸಿದಾಗ ವಾಹನ ಚಾಲನೆಗೆ ಬರಲಿಲ್ಲ. ಪರಿಶೀಲನೆ ನಡೆಸಿದಾಗ ಬಸ್‌ನ ಬ್ಯಾಟರಿ ಕಾಣೆಯಾಗಿರುವುದು ಪತ್ತೆಯಾಗಿದೆ.

ಈ ಸಂಬಂಧ ಚಾಲಕ ದಿನೇಶ್ ನೀಡಿದ ದೂರಿನ ಮೇರೆಗೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಇದೇ ವೇಳೆ ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಲಾರಿ ಬ್ಯಾಟರಿ ಕಳವು ಪ್ರಕರಣವೂ ತನಿಖೆಯಲ್ಲಿದೆ. ವಿವಿಧ ಕಡೆಗಳಲ್ಲಿ ನಿಲ್ಲಿಸಿದ್ದ ಸುಮಾರು 10 ಲಾರಿಗಳ ಬ್ಯಾಟರಿಗಳನ್ನು ಕಳವು ಮಾಡಲಾಗಿತ್ತು.

ಈ ಪ್ರಕರಣದಲ್ಲಿ ಆಲಂಪಾಡಿಯ ಶೈವಳಪ್ಪಿನ ನಿವಾಸಿ ಶಮೀರ್ (50) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ನಾಯ್ಕಾಪು, ಸೀತಾಂಗೋಳಿ, ನಾರಾಯಣ ಮಂಗಲ, ಭಾಸ್ಕರನಗರ ಮತ್ತು ಪೆರ್ವಾಡ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ ಕಳವು ನಡೆಸಿದ ಆರೋಪ ಶಮೀರ್ ಹಾಗೂ ಆತನ ತಂಡದ ಮೇಲಿದೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಶಮೀರ್‌ನ ಸಹಚರ ಎನ್ನಲಾದ ನೆಲ್ಲಿಕಟ್ಟೆಯ ಅಬ್ದುಲ್ ಮಜೀದ್‌ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ವಿಟ್ಲ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ನಡೆದ ಬ್ಯಾಟರಿ ಕಳವು ಪ್ರಕರಣಗಳಲ್ಲಿ ಆತನ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ.

ಪ್ರಕರಣದ ಹೆಚ್ಚಿನ ತನಿಖೆಗಾಗಿ ಶಮೀರ್‌ನನ್ನು ಕರ್ನಾಟಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪವಾಸ್ ಮತ್ತು ಫಾರೂಕ್ ಎಂಬ ಇಬ್ಬರು ಆರೋಪಿಗಳು ಇನ್ನೂ ಪೊಲೀಸರು ಬಂಧಿಸಿಲ್ಲ.ಕುಂಬಳೆ ಪರಿಸರದಲ್ಲಿ ಬ್ಯಾಟರಿ ಕಳ್ಳತನ ಹೆಚ್ಚುತ್ತಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!