ಕಾಸರಗೋಡು: ಮೇಲ್ಪರಂಬದಲ್ಲಿ ವಿದ್ಯುತ್ ಬಿಲ್ ಪಾವತಿಸದ ಕಾರಣಕ್ಕೆ ಸಿಬ್ಬಂದಿಗಳು ಮನೆಯ ಪ್ಯೂಸ್ ತೆಗೆದು ಸಂಪರ್ಕ ವಿಚ್ಛೇಧಿಸಿದ ಅದೇ ದಿನ ರಾತ್ರಿ, ಮಹಿಳೆಗೆ ಮನೆಯೊಳಗೆ ವಿಷಪೂರಿತ ಹಾವು ಕಚ್ಚಿದೆ.

ಮೇಲ್ಪರಂಬದ ಬಾಡಿಗೆ ಕ್ವಾರ್ಟರ್ಸ್ನಲ್ಲಿ ವಾಸವಿರುವ 43 ವರ್ಷದ ಮಹಿಳೆಗೆ ಈ ದುರ್ಘಟನೆ ಸಂಭವಿಸಿದೆ. ಇತ್ತೀಚೆಗೆ ಬಂದ ವಿದ್ಯುತ್ ಬಿಲ್ ಮೊತ್ತ ಹೆಚ್ಚಾಗಿದ್ದರಿಂದ ಸಕಾಲದಲ್ಲಿ ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಆಕ್ರೋಶಗೊಂಡಂತೆ ವಿದ್ಯುತ್ ಇಲಾಖೆ ಸಿಬ್ಬಂದಿ ಬಂದು ಪ್ಯೂಸ್ ಕಳಚಿ ಸಂಪರ್ಕ ಕಡಿತಗೊಳಿಸಿದ್ದರು.

ಅದೇ ರಾತ್ರಿ ಅಡುಗೆ ಮನೆಯಲ್ಲಿ ಮಹಿಳೆಗೆ ಹಾವು ಕಚ್ಚಿದೆ. ಆ ಸಮಯದಲ್ಲಿ ಮನೆಯಲ್ಲಿ ಮಗಳು ಮಾತ್ರ ಇದ್ದಳು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗಿದೆ. ವಿದ್ಯುತ್ ಇಲ್ಲದೆ ಕತ್ತಲು ಆವರಿಸಿದ್ದರಿಂದಲೇ ಈ ಅಪಾಯ ಸಂಭವಿಸಿದೆ ಎಂದು ಕುಟುಂಬಸ್ಥರು ದೂರಿದ್ದಾರೆ.


