ಕಾಸರಗೋಡು: ಕರಾವಳಿ ಕ್ರೈಸ್ತರ ಪ್ರಮುಖ ಸಾಂಪ್ರದಾಯಿಕ ಹಾಗೂ ಕೃಷಿ ಆಧಾರಿತ ಹಬ್ಬವಾದ ‘ಮೊಂತಿ ಹಬ್ಬ’ವನ್ನು (ತೆನೆ ಹಬ್ಬ) ಜಿಲ್ಲೆಯಾದ್ಯಂತ ಅತ್ಯಂತ ಭಕ್ತಿ-ಸಂಭ್ರಮಗಳಿಂದ ಆಚರಿಸಲಾಯಿತು.

ಕಯ್ಯಾರ್ ಕ್ರಿಸ್ತ ರಾಜ ದೇವಾಲಯದಲ್ಲಿ ಧರ್ಮಗುರು ಫಾದರ್ ವಿಶಾಲ್ ಮೆಲ್ವಿನ್ ಮೊನೀಸ್ ಅವರ ನೇತೃತ್ವದಲ್ಲಿ ವಿಶೇಷ ಬಲಿಪೂಜೆ ನೆರವೇರಿತು. ಮಕ್ಕಳು ಮೇರಿ ಮಾತೆಯ ಮೂರ್ತಿಗೆ ಹೂ ಅರ್ಪಿಸಿ ಪ್ರಾರ್ಥಿಸಿದರು. ಬೇಳ, ತಲಪಾಡಿ, ವರ್ಕಾಡಿ, ಮಂಜೇಶ್ವರ, ಕುಂಬಳೆ ಸೇರಿದಂತೆ ಜಿಲ್ಲೆಯ ವಿವಿಧ ಕೆಥೋಲಿಕ್ ಚರ್ಚ್‌ಗಳಲ್ಲಿಯೂ ವಿಶೇಷ ಪೂಜಾದಿ ವಿಧಿವಿಧಾನಗಳು ಜರುಗಿದವು.

ಕೃಷಿ ಸಮೃದ್ಧಿಯ ಸಂಕೇತವಾಗಿ ಗದ್ದೆಗಳಿಂದ ತಂದ ಹೊಸ ಭತ್ತದ ಕದಿರುಗಳನ್ನು ಆಶೀರ್ವದಿಸಿ, ಭಕ್ತರಿಗೆ ವಿತರಿಸಲಾಯಿತು. ಆಶೀರ್ವದಿಸಿದ ಈ ಧಾನ್ಯವನ್ನು ಮನೆಗೆ ತಂದು ಹಾಲಿನಲ್ಲಿ ಬೆರೆಸಿ ಕುಡಿಯುವುದು ಹಾಗೂ ಬಾಳೆಎಲೆಯಲ್ಲಿ ಒಂಬತ್ತಕ್ಕೂ ಹೆಚ್ಚು ಬಗೆಯ ಸಸ್ಯಾಹಾರಿ ಖಾದ್ಯಗಳೊಂದಿಗೆ ‘ನವೆಂ ಜೆವಣ್’ ಸವಿಯುವುದು ಹಬ್ಬದ ಪ್ರಮುಖ ಆಕರ್ಷಣೆಯಾಗಿತ್ತು. ಪ್ರಕೃತಿ ಕೃತಜ್ಞತೆ ಹಾಗೂ ಕೌಟುಂಬಿಕ ಸೌಹಾರ್ದತೆಯನ್ನು ಸಾರುವ ಈ ಹಬ್ಬವು ಜಿಲ್ಲೆಯಾದ್ಯಂತ ಶಾಂತಿ, ನೆಮ್ಮದಿಯಿಂದ ನೆರವೇರಿತು.

