ಕಾಸರಗೋಡು : ಜಿಲ್ಲೆಯಾದ್ಯಂತ ತೀರ್ಥ ಅಮಾವಾಸ್ಯೆಯ ಅಂಗವಾಗಿ ವಿವಿಧ ಧಾರ್ಮಿಕ ಕ್ಷೇತಗಳಲ್ಲಿ ಹಾಗೂ ಸಮುದ್ರ ತೀರಗಳಲ್ಲಿ ಇಂದು ಬೆಳಿಗ್ಗೆಯಿಂದಲೇ ಶ್ರದ್ಧಾ-ಭಕ್ತಿಯಿಂದ ಪುಣ್ಯಸ್ನಾನ ನೆರವೇರುತ್ತಿದೆ.

ಮಂಜೇಶ್ವರದ ಐಲ ಶಿವಾಜಿನಗರದ ಸಿಂಧೂ ಸಮುದ್ರ ಕಿನಾರೆಯಲ್ಲಿ ಬೆಳಗಿನ ಜಾವದಿಂದಲೇ ಕರ್ನಾಟಕ ಸೇರಿದಂತೆ ಹೊರನಾಡಿನ ಸಾವಿರಾರು ಭಕ್ತರು ಆಗಮಿಸಿ, ಸಮುದ್ರದಲ್ಲಿ ಮುಳುಗೆದ್ದು ಪುನೀತರಾದರು.

ಈ ಮಹೋತ್ಸವಕ್ಕಾಗಿ ಐಲ ರೈಲ್ವೇ ಗೇಟ್ನಿಂದ ಕಡಲತೀರದವರೆಗೆ ತಳಿರು-ತೋರಣಗಳಿಂದ ರಮಣೀಯವಾಗಿ ಶೃಂಗರಿಸಲಾಗಿದೆ. ಸ್ಥಳೀಯ ಶ್ರೀ ಗಣೇಶೋತ್ಸವ ಮತ್ತು ಶಾರದೋತ್ಸವ ಸಮಿತಿಯು ಭಕ್ತರ ಅನುಕೂಲಕ್ಕಾಗಿ ರಕ್ಷಣಾ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದು, ಕಡಲತೀರದಲ್ಲಿ ಭಕ್ತಿಪೂರ್ವಕ ವಾತಾವರಣ ನೆಲೆಸಿದೆ.

