ಕಾಸರಗೋಡು : ಇಲ್ಲಿಯ ಸಿಟಿಜನ್ನಗರದ ಹೋಟೆಲೊಂದರಲ್ಲಿ ನೀಡಿದ ಆಹಾರದ ತರಕಾರಿ ಗುಣಮಟ್ಟ ಸರಿಯಿಲ್ಲವೆಂದು ಪ್ರಶ್ನಿಸಿದ ಯುವಕರ ಮೇಲೆ ಹೋಟೆಲ್ ಮಾಲೀಕ ಹಾಗೂ ಸಿಬ್ಬಂದಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಎಡನೀರಿನ ಅಜಿತ್ ಕೆ. (23) ನೀಡಿದ ದೂರಿನನ್ವಯ ವಿದ್ಯಾನಗರ ಪೊಲೀಸರು ಐದು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 9ರಂದು ಅಜಿತ್ ಹಾಗೂ ಅವರ ಸ್ನೇಹಿತರಾದ ಅಭಿಲಾಷ್, ಸುಮೋದ್, ಹರಿಪ್ರಸಾದ್ ಮತ್ತು ಕೆ. ಅಜಿತ್ ಹೋಟೆಲ್ಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ.

ಆಹಾರದ ಕಳಪೆ ಗುಣಮಟ್ಟವನ್ನು ಪ್ರಶ್ನಿಸಿದ್ದೇ ತಡ, ಕೆರಳಿದ ಹೋಟೆಲ್ ಮಾಲೀಕ ಹಾಗೂ ಇತರ ಮೂವರು ಸೇರಿ ಕಬ್ಬಿಣದ ಸರಳುಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

