ಮಂಜೇಶ್ವರ: ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು 2027ರ ಜನವರಿ 6 ರಿಂದ ಜನವರಿ 16ರವರೆಗೆ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಬ್ರಹ್ಮಕಲಶೋತ್ಸವ ಸಮಿತಿಯ ಸಭೆಯು ಅಕ್ಟೋಬರ್ 25ರ ಭಾನುವಾರ ಸಂಜೆ 4 ಗಂಟೆಗೆ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಶ್ರೀ ಗೋಪಾಲಕೃಷ್ಣ ತಂತ್ರಿಯವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ವಿಘ್ನೇಶ್ ತಂತ್ರಿಯವರ ಉಪಸ್ಥಿತಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಡಾ. ಜಯಪಾಲ್ ಶೆಟ್ಟಿ ಮಾಡ ವಹಿಸಿದ್ದರು.

ಸಭೆಯಲ್ಲಿ ಬ್ರಹ್ಮಕಲಶೋತ್ಸವದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪೂರ್ವಸಿದ್ಧತೆಗಳು ಹಾಗೂ ಉತ್ಸವವನ್ನು ಯಶಸ್ವಿಯಾಗಿ ನಡೆಸುವ ಕುರಿತು ವಿಸ್ತಾರವಾಗಿ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಯುತ ಯಾದವ ಬಡಾಜೆ ವಿವರಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಲರಾಮ ಭಟ್ ಕಾಕುಂಜೆ ಅವರು ಬ್ರಹ್ಮಕಲಶೋತ್ಸವ ಇದುವರೆಗೆ ನಡೆದ ಜೀರ್ಣೋದ್ಧಾರ ಕೆಲಸ ಕಾರ್ಯಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಉಪಸಮಿತಿಗಳ ಘೋಷಣೆ ಹಾಗೂ ವಿವಿಧ ಸಮಿತಿಗಳ ಜವಾಬ್ದಾರಿಗಳ ಕುರಿತು ಮೊಕ್ತೇಸರರಾದ ಶೈಲೇಶ್ ಎಸ್. ಸ್ಪೂರ್ತಿನಗರ ಅವರು ವಿವರಿಸಿದರು.

ಪದ್ಮನಾಭ ಕಡಪ್ಪರ ಹಾಗೂ ಗೋಪಾಲ್ ಶೆಟ್ಟಿ ಅರಿಬೈಲು ಅವರು ಸಭೆಯಲ್ಲಿ ಮಾತನಾಡಿ, ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಭಕ್ತಾದಿಗಳು, ಗ್ರಾಮಸ್ಥರು ಹಾಗೂ ಎಲ್ಲ ಸಮಿತಿಗಳ ಸದಸ್ಯರ ಸಹಕಾರ ಅಗತ್ಯವೆಂದು ತಿಳಿಸಿದರು. ಅಧ್ಯಕ್ಷೀಯ ಸಮಾರೋಪ ನುಡಿಗಳನ್ನಾಡಿದ ಡಾ. ಜಯಪಾಲ್ ಶೆಟ್ಟಿ ಮಾಡ ಇವರು ಉತ್ಸವದ ಸಿದ್ಧತೆಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸುವಂತೆ ಕರೆ ನೀಡಿದರು. ಹರೀಶ್ ಶೆಟ್ಟಿ ಮಾಡ ಅವರು ವಂದನಾರ್ಪಣೆ ಸಲ್ಲಿಸಿದರು.
ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಂಕರ ಪಡುಬೈಲು, ಮೊಕ್ತೇಸರರು ರಾಮಚಂದ್ರ ಸುರಿಬೈಲು, ಸುಕೇಶ್ ಆಳ್ವ ಪುಚ್ಚತ್ತಬೈಲು, ಬ್ರಹ್ಮ ಕಲಶೋತ್ಸವ ಸಮಿತಿಯ ಉಪಾಧ್ಯಕ್ಷರು ಕಿರಣ್ ಶೆಟ್ಟಿ ಮಾಡ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಹಿತ್ ಸ್ಪೂರ್ತಿನಗರ, ಚಂದ್ರಮೋಹನ್ ಹೊಳ್ಳ ಸೇರಿದಂತೆ ಗುತ್ತು ಗುರಿಕಾರರು, ಗ್ರಾಮ ಗುರಿಕಾರರು, ಗ್ರಾಮಸ್ಥರು ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಡಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವನ್ನು ಭಕ್ತಿಭಾವದಿಂದ ಹಾಗೂ ಯಶಸ್ವಿಯಾಗಿ ನೆರವೇರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವ ಕುರಿತು ಸಭೆಯಲ್ಲಿ ಒತ್ತು ನೀಡಲಾಯಿತು.

