ಕಳೆದ 13 ವರ್ಷಗಳಿಂದ ಕೋಮಾದಲ್ಲಿ ಜೀವಂತ ಶವದಂತೆ ಮಲಗಿದ್ದ 31 ವರ್ಷದ ಹರೀಶ್ ರಾಣಾ ಕೊನೆಗೂ ಜೀವನದ ಅಂತಿಮ
ಘಟಕ್ಕೆ ತಲುಪಿದರು. ಹೃದಯ ಕಲುಕುವ ದೃಶ್ಯಗಳ ನಡುವೆ ಕುಟುಂಬಸ್ಥರು ಅವರಿಗೆ ಭಾವನಾತ್ಮಕ ವಿದಾಯ ಹೇಳಿದರು.
ಏಮ್ಸ್ ಆಸ್ಪತ್ರೆಯ ಹಾಸಿಗೆಯ ಸುತ್ತ ಕುಟುಂಬಸ್ಥರು ನಿಂತು, ಕಣ್ಣೀರಿನ ನಡುವೆ ತಮ್ಮ ಪ್ರೀತಿಯವನಿಗೆ ಕೊನೆಯ ಮಾತುಗಳನ್ನು ಹೇಳಿದರು. “ನೀನು ಹೊರಡುವ ಸಮಯ ಬಂದಿದೆ… ಎಲ್ಲರನ್ನೂ ಕ್ಷಮಿಸು…” ಎಂದು ಮನವಿ ಮಾಡುತ್ತಾ ಅವರ ಕೈಗಳನ್ನು ಹಿಡಿದುಕೊಂಡು ಕುಟುಂಬಸ್ಥರು ಕಣ್ಣೀರು ಹಾಕಿದರು.
ಈ ಮನಕಲಕುವ ಕ್ಷಣಗಳ 22 ಸೆಕೆಂಡ್‌ಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ರಾಣಾ ಅವರ ತಾಯಿ ಮಗನ ಪಕ್ಕದಲ್ಲಿ ಕುಳಿತುಕೊಂಡು ದುಃಖದಿಂದ ಕಣ್ಣೀರು ಹಾಕುತ್ತಿರುವುದು ಕಾಣಿಸುತ್ತದೆ. ಅಷ್ಟೇ ಅಲ್ಲ, ಬ್ರಹ್ಮ ಕುಮಾರಿ ಸಹೋದರಿಯೊಬ್ಬರು ಅವರ ಹಣೆಯ ಮೇಲೆ ತಿಲಕ ಹಚ್ಚಿ, “ಎಲ್ಲರನ್ನೂ ಕ್ಷಮಿಸಿ… ಈಗ ಹೊರಡುವ ಸಮಯ ಬಂದಿದೆ…” ಎಂದು ತಲೆಯನ್ನು ಸವರಿ ಹೇಳುವ ದೃಶ್ಯ ಮನಸ್ಸು ತಟ್ಟುವಂತಿದೆ.
ಕುಟುಂಬಸ್ಥರು ಕೊನೆಯ ವಿದಾಯ ಹೇಳಿದ ನಂತರ ವೈದ್ಯರು ಕ್ರಮೇಣವಾಗಿ ಜೀವರಕ್ಷಕ ಸಾಧನಗಳನ್ನು ಹಿಂತೆಗೆದುಕೊಂಡರು.
2013ರಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದ ಪರಿಣಾಮ ಹರೀಶ್ ರಾಣಾ ಅವರ ಮೆದುಳಿಗೆ ಗಂಭೀರ ಹಾನಿಯಾಗಿತ್ತು. ಆ ದಿನದಿಂದಲೇ ಅವರು ಜೀವ ರಕ್ಷಕ ಸಾಧನಗಳ ಸಹಾಯದಿಂದ ಬದುಕುತ್ತಿದ್ದರು. ಉಸಿರಾಟಕ್ಕಾಗಿ ಟ್ರಾಕಿಯೊಸ್ಟೋಮಿ ಟ್ಯೂಬ್ ಮತ್ತು ಆಹಾರಕ್ಕಾಗಿ ಗ್ಯಾಸ್ಟೋಜೆಜುನೊಸೊಮಿ ಟ್ಯೂಬ್ ಬಳಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಮಗನ ಈ ದೀರ್ಘ ಪೀಡೆಯನ್ನು ನೋಡಿ ಮನಸ್ಸು ಮುರಿದ ಪೋಷಕರು ಕೊನೆಗೆ ದಯಾಮರಣಕ್ಕೆ ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಮಾರ್ಚ್ 11ರಂದು ಸುಪ್ರೀಂ ಕೋರ್ಟ್ ಈ ಮನವಿಗೆ ಒಪ್ಪಿಗೆ ಸೂಚಿಸಿತು.
ಹೀಗಾಗಿ 13 ವರ್ಷಗಳ ನೋವು, ನಿರೀಕ್ಷೆ ಮತ್ತು ಹೋರಾಟದ ಬಳಿಕ ಹರೀಶ್ ರಾಣಾ ಅವರ ಬದುಕು ಶಾಂತ ಅಂತ್ಯ ಕಂಡಿದೆ.ಅವರ ಕೊನೆಯ ಕ್ಷಣಗಳ ದೃಶ್ಯಗಳು… ಕುಟುಂಬದ ಪ್ರೀತಿ ಮತ್ತು ನೋವಿನ ಕಥೆಯನ್ನು ದೇಶದ ಜನರ ಮನಸ್ಸಿಗೆ ತಲುಪಿಸುತ್ತಿವೆ.