ಟೆಹ್ರಾನ್ ಮೇಲೆ ಭೀಕರ ವಾಯುದಾಳಿ: ಐಆರ್‌ಜಿಸಿ ಗುಪ್ತಚರ ಮುಖ್ಯಸ್ಥ ಖಾದೆಮಿ ಸಾವು

ಟೆಹ್ರಾನ್:ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ದೇಶದ ವಿವಿಧ ಭಾಗಗಳ ಮೇಲೆ ಅಮೆರಿಕಾ ಮತ್ತು ಇಸ್ರೇಲ್ ಸಂಯುಕ್ತವಾಗಿ ಸೋಮವಾರ ಭೀಕರ ವಾಯುದಾಳಿ ನಡೆಸಿದ ಪರಿಣಾಮ, ಇರಾನ್‌ನ ಪ್ರಭಾವಿ ಅರೆಸೇನಾ ಪಡೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗುಪ್ತಚರ ವಿಭಾಗದ ಮುಖ್ಯಸ್ಥ ಮೇಜರ್ ಜನರಲ್ ಮಾಜಿದ್ ಖಾದೆಮಿ ಸಾವನ್ನಪ್ಪಿದ್ದಾರೆ. ಈ ವಿಷಯವನ್ನು ಐಆರ್‌ಜಿಸಿ ಅಧಿಕೃತವಾಗಿ ದೃಢಪಡಿಸಿದೆ.

ಟೆಹ್ರಾನ್‌ನ ವಸತಿ ಪ್ರದೇಶಗಳನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಖಾದೆಮಿ ಹುತಾತ್ಮರಾಗಿದ್ದಾರೆ. ಇವರು ಕಳೆದ ಜೂನ್‌ನಲ್ಲಿ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದ ಮೊಹಮ್ಮದ್ ಕಾಜಿಮಿ ಅವರ ಸ್ಥಾನವನ್ನು ವಹಿಸಿಕೊಂಡಿದ್ದರು. ಈಗ ಅವರ ಸಾವಿನಿಂದ ಐಆರ್‌ಜಿಸಿಗೆ ಮತ್ತೊಂದು ದೊಡ್ಡ ಹೊಡೆತ ಬಿದ್ದಂತಾಗಿದೆ.ಸೋಮವಾರ ಮುಂಜಾನೆಯಿಂದಲೇ ಟೆಹ್ರಾನ್ ನಗರದಲ್ಲಿ ಭಾರಿ ಸ್ಫೋಟಗಳ ಶಬ್ದಗಳು ಕೇಳಿಬಂದಿದ್ದು, ನಗರದ ಪ್ರಮುಖ ಆಜಾದಿ ಸ್ಕ್ವೇರ್ ಸಮೀಪದ ಶರೀಫ್ ತಾಂತ್ರಿಕ ವಿಶ್ವವಿದ್ಯಾಲಯದ ಬಳಿ ನಡೆದ ದಾಳಿಯಿಂದ ದಟ್ಟ ಕಪ್ಪು ಹೊಗೆ ಆವರಿಸಿದೆ. ಈ ದಾಳಿಯಲ್ಲಿ ಇದುವರೆಗೆ ಕನಿಷ್ಠ 25ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ.

ಹಾರ್ಮುಜ್ ಜಲಸಂಧಿ ತೆರೆಯುವ ಕುರಿತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಗಡುವು ಸಮೀಪಿಸುತ್ತಿರುವ ನಡುವೆಯೇ ಈ ದಾಳಿ ನಡೆದಿರುವುದು ಗಮನಾರ್ಹವಾಗಿದೆ. ದಾಳಿಗೆ ಪ್ರತಿಯಾಗಿ ಇರಾನ್, ಇಸ್ರೇಲ್ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಇರುವ ಅಮೆರಿಕಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ಆರಂಭಿಸಿದೆ.ಇರಾನ್‌ನ ಐಆರ್‌ಜಿಸಿ ಗುಪ್ತಚರ ವಿಭಾಗವು ದೇಶದ ಅತ್ಯಂತ ಶಕ್ತಿಶಾಲಿ ಭದ್ರತಾ ಘಟಕವಾಗಿದ್ದು, ನೇರವಾಗಿ ಪರಮೋಚ್ಚ ನಾಯಕರಿಗೆ ಉತ್ತರದಾಯಿಯಾಗಿರುತ್ತದೆ. ವಿದೇಶಿ ಬೆದರಿಕೆಗಳನ್ನು ನಿಯಂತ್ರಿಸುವಲ್ಲಿ ಇದರ ಪಾತ್ರ ಮಹತ್ವದ್ದಾಗಿದೆ. ಇದರ ಮುಖ್ಯಸ್ಥರ ಹತ್ಯೆ ಇರಾನ್‌ಗೆ ಗಂಭೀರ ಹಿನ್ನಡೆಯಾಗಿ ಪರಿಗಣಿಸಲಾಗಿದೆ.

ಇದರ ನಡುವೆ, ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಧ್ಯಸ್ಥಿಕೆದಾರರು 45 ದಿನಗಳ ಕದನ ವಿರಾಮಕ್ಕೆ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಆದಾಗ್ಯೂ, ಇರು ರಾಷ್ಟ್ರಗಳ ನಡುವಿನ ಸಂಘರ್ಷವು ಶಮನವಾಗುವ ಲಕ್ಷಣಗಳು ತಕ್ಷಣಕ್ಕೆ ಕಾಣುತ್ತಿಲ್ಲ.

SHARE
Loading spinner

Leave a Reply

Your email address will not be published. Required fields are marked *

error: Content is protected !!