ಉಡುಪಿಯಲ್ಲಿ ‘ಶ್ರೀರಾಮ ಟಂಕ ಜಪ’ ಅಭಿಯಾನಕ್ಕೆ ಚಾಲನೆ: ಗೀತಾಮಂದಿರದಲ್ಲಿ ಭಕ್ತಿಭಾವದ ಕಾರ್ಯಕ್ರಮ

ಉಡುಪಿ: ಧಾರ್ಮಿಕ ನಗರಿ ಉಡುಪಿಯ ಶ್ರೀಕೃಷ್ಣ ಮಠ ಸಮೀಪದ ಗೀತಾಮಂದಿರ ದ ಶ್ರೀ ಪುತ್ತಿಗೆ ನರಸಿಂಹ ಸಭಾಂಗಣದಲ್ಲಿ ವಿಶೇಷ ‘ಶ್ರೀರಾಮ ಟಂಕ ಜಪ’ ಅಭಿಯಾನಕ್ಕೆ ಭಕ್ತಿಪೂರ್ವಕ ಚಾಲನೆ ನೀಡಲಾಯಿತು.

ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಅಭಿಯಾನವನ್ನು ಉದ್ಘಾಟಿಸಿ ಚಾಲನೆ ನೀಡಿದರು. ಇನ್ನು ಮುಂದೆ ಪ್ರತಿ ಭಾನುವಾರ ಸಾರ್ವಜನಿಕರಿಗಾಗಿ ಈ ಜಪ ಅಭಿಯಾನ ನಿರಂತರವಾಗಿ ನಡೆಯಲಿದೆ.

ಪುರಾಣ ಕಾಲದ ಅಪರೂಪದ ನಾಣ್ಯವಾಗಿರುವ “ಶ್ರೀರಾಮ ಟಂಕ”ಕ್ಕೆ ವಿಶಿಷ್ಟ ಧಾರ್ಮಿಕ ಮಹತ್ವವಿದೆ. ಈ ಪವಿತ್ರ ನಾಣ್ಯವನ್ನು ಎರಡು ಕೈಗಳ ಮಧ್ಯೆ ಇಟ್ಟುಕೊಂಡು ಸುಮಾರು 16 ನಿಮಿಷಗಳ ಕಾಲ “ಶ್ರೀರಾಮ ಜಯ ರಾಮ ಜಯ ಜಯ ರಾಮ” ಎಂಬ ಮಂತ್ರವನ್ನು ಜಪಿಸುವುದು ಅಭಿಯಾನದ ಮುಖ್ಯ ಅಂಶವಾಗಿದೆ.

ಈ ಜಪದ ಮೂಲಕ ದೇಹದಲ್ಲಿನ ನಕಾರಾತ್ಮಕ ಶಕ್ತಿಗಳು ದೂರವಾಗಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಹಾಗೂ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಕಾರ್ಯಕ್ರಮದಲ್ಲಿ ಗೀತಾಮಂದಿರದ ಪ್ರಭಾರಿ ಕೆ.ವಿ. ರಮಣಾಚಾರ್ಯ ಮಾತನಾಡಿ, ಶ್ರೀರಾಮ ನಾಮ ಜಪದ ಮೂಲಕ ವ್ಯಕ್ತಿಗತ ಹಾಗೂ ಸಾಮಾಜಿಕ ಬದುಕನ್ನು ಉನ್ನತೀಕರಿಸಿಕೊಳ್ಳುವಂತೆ ಕರೆ ನೀಡಿದರು. ಅಭಿಯಾನದ ಪ್ರವರ್ತಕರಾದ ಮಂಗಳೂರಿನ ಮಂಜುನಾಥ ಕುಡ್ವ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಭಜನಾ ಸಂಚಾಲಕಿ ಕಮಲವತಿ ವಾಸುದೇವ್, ಶ್ರೀನಿವಾಸ್ ರಾವ್ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದು, ರಾಮನಾಮ ಸ್ಮರಣೆಯಲ್ಲಿ ಭಾಗವಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!