ಬೆಂಗಳೂರು: ಕೇಂದ್ರ ಸರ್ಕಾರ ಮಹಿಳೆಯರ ಹೆಸರಿನಲ್ಲಿ ವಂಚನೆ ಮಾಡಲು ಮುಂದಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ವಾಸ್ತವದಲ್ಲಿ ಬಿಜೆಪಿ ನಾಯಕರು ಎಂದರು. 2023ರಲ್ಲಿ ಮಹಿಳಾ ಮೀಸಲಾತಿ ಮಸೂದೆ ಬಂದಾಗ ಅದನ್ನು ಸರ್ವಾನುಮತದಿಂದ ಅಂಗೀಕರಿಸಿದ್ದೇವೆ ಎಂದು ತಿಳಿಸಿದರು.
ಮಹಿಳಾ ಮೀಸಲಾತಿಗೆ ಕ್ಷೇತ್ರ ಪುನರ್ವಿಂಗಡಣೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ. ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ನೀಡುವ ಕುರಿತು ತಕ್ಷಣ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 33 ಶೇಕಡಾ ಮೀಸಲಾತಿ ಜಾರಿಗೊಳಿಸಿದರೂ ಯಾವುದೇ ತೊಂದರೆ ಇರುವುದಿಲ್ಲ, ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.
ಇದೇ ವೇಳೆ, ಇತ್ತೀಚಿನ ಚುನಾವಣೆಗೆ ಮೊದಲು ಈ ಮಸೂದೆ ಜಾರಿಗೆ ಬಂದಿದ್ದರೆ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಟಿಕೆಟ್ ಸಿಗುತ್ತಿತ್ತು ಎಂದು ಅಭಿಪ್ರಾಯಪಟ್ಟರು. ಮಹಿಳೆಯರ ಹೆಸರಿನಲ್ಲಿ ಅಧಿಕಾರ ಉಳಿಸಿಕೊಳ್ಳಲು ಕ್ಷೇತ್ರ ಪುನರ್ವಿಂಗಡಣೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಇದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ದೊಡ್ಡ ಮಟ್ಟದ ಸಮಸ್ಯೆಗಳು ಎದುರಾಗಬಹುದು. ಮಹಿಳೆಯರ ಹೆಸರಿನಲ್ಲಿ ಅಧಿಕಾರ ಕೇಂದ್ರೀಕರಣ ಮಾಡಲು ಮಾಡಿದ ಪ್ರಯತ್ನ ಇದೀಗ ವಿಫಲವಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಸಂಚು ಎಂದು ದಿನೇಶ್ ಗುಂಡೂರಾವ್ ದೂರಿದರು.