ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿರುವ ಘಟನೆ ವ್ಯಾಪಕ ಖಂಡನೆಗೆ ಗುರಿಯಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಶ್ವದಾದ್ಯಂತ ಭಾರತೀಯ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವರದಿಗಳ ಪ್ರಕಾರ, ಟೆಕ್ಸಾಸ್‌ನ Frisco ನಗರದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಭಾರತದ ತ್ರಿವರ್ಣ ಧ್ವಜವನ್ನು ಹರಿದು ಹಾಕುತ್ತಾ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾನೆ ಎನ್ನಲಾಗಿದೆ.
ಸಿಟಿ ಹಾಲ್ ಸಮೀಪ ನಡೆದ ಘಟನೆಯಲ್ಲಿ, ಆರೋಪಿ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಅದನ್ನು ಹರಿದು ಹಾಕಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಈ ವೇಳೆ ಆತ ಭಾರತ ವಿರೋಧಿ ಘೋಷಣೆಗಳನ್ನು ಕೂಗಿರುವುದು ಕೇಳಿಬಂದಿದ್ದು, ಸ್ಥಳದಲ್ಲಿದ್ದ ಕೆಲವರು ಆತನ ಕೃತ್ಯಕ್ಕೆ ಬೆಂಬಲ ಸೂಚಿಸಿರುವ ದೃಶ್ಯಗಳೂ ವೈರಲ್ ಆಗಿವೆ.
ಘಟನೆಯ ವಿಡಿಯೊ ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದ್ದು, ಸಾವಿರಾರು ಮಂದಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಧ್ವಜಕ್ಕೆ ಅವಮಾನ ಮಾಡಿರುವುದನ್ನು ಖಂಡಿಸಿರುವ ನೆಟ್ಟಿಗರು, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇಂತಹ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ನಾಗರಿಕರು ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯರ ವಿರುದ್ಧ ದ್ವೇಷ ಮತ್ತು ವಲಸೆ ವಿರೋಧಿ ಮನೋಭಾವ ಹೆಚ್ಚುತ್ತಿರುವ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ