ಐದು ದಿನಗಳಲ್ಲಿ ಎರಡನೇ ಬಾರಿ ಇ-ಮೇಲ್ ಮೂಲಕ ಬೆದರಿಕೆ; ಶ್ವಾನದಳದಿಂದ ತಪಾಸಣೆ
ಉಡುಪಿ, ಜೂನ್ 27:
ಐದು ದಿನಗಳ ಹಿಂದೆಯಷ್ಟೇ ಹುಸಿ ಬಾಂಬ್ ಬೆದರಿಕೆಗೆ ಗುರಿಯಾಗಿದ್ದ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಶುಕ್ರವಾರ ಮತ್ತೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಪೊಲೀಸರು ತಕ್ಷಣ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಬೆದರಿಕೆ ಸಂದೇಶದ ಮಾಹಿತಿ ದೊರೆಯುತ್ತಿದ್ದಂತೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಪೊಲೀಸ್ ಸಿಬ್ಬಂದಿ ನ್ಯಾಯಾಲಯದ ಆವರಣದಲ್ಲಿ ಸಮಗ್ರ ತಪಾಸಣೆ ನಡೆಸುತ್ತಿದ್ದಾರೆ. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆಯೇ ಎಂಬ ಕುರಿತು ಪರಿಶೀಲನೆ ಮುಂದುವರಿದಿದೆ.
ಕಳೆದ ಬಾರಿ ಕೂಡ ಇದೇ ರೀತಿಯ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿಯಲ್ಲಿ ಆತಂಕ ಉಂಟಾಗಿತ್ತು. ಬಳಿಕ ಪೊಲೀಸರು ಹಾಗೂ ಶ್ವಾನದಳ ನಡೆಸಿದ ತಪಾಸಣೆಯಲ್ಲಿ ಅದು ಹುಸಿ ಬೆದರಿಕೆ ಎಂಬುದು ದೃಢಪಟ್ಟಿತ್ತು.
ಈ ಬಾರಿ ಬೆದರಿಕೆ ಬಂದಿದ್ದರೂ ನ್ಯಾಯಾಲಯದ ಕಲಾಪಗಳು ಎಂದಿನಂತೆ ಸುಸೂತ್ರವಾಗಿ ನಡೆಯುತ್ತಿದ್ದು, ವಕೀಲರು ಹಾಗೂ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಮುಂದುವರಿಸಿದ್ದಾರೆ. ಬೆದರಿಕೆ ಇ-ಮೇಲ್ನ ಮೂಲವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.