ಬಲ್ಗೇರಿಯಾದ ಭವಿಷ್ಯಗಾರ್ತಿ ಬಾಬಾ ವಂಗಾ ಅವರ 2025ರ ಮುನ್ನೋಟಗಳು ಆತಂಕ ಮೂಡಿಸಿವೆ. ಆರ್ಥಿಕ ಕುಸಿತ, ಯುದ್ಧದ ಭೀತಿ, ಮತ್ತು ನೈಸರ್ಗಿಕ ವಿಕೋಪಗಳ ಬಗ್ಗೆ ಅವರು ನೀಡಿದ ಎಚ್ಚರಿಕೆಗಳು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿವೆ. ಟೆಲಿಪತಿ ಮತ್ತು ಭೂಮ್ಯತೀತ ಜೀವಿಗಳ ಸಂಪರ್ಕದಂತಹ ಅವರ ವಿಚಿತ್ರ ಭವಿಷ್ಯವಾಣಿಗಳು ಕುತೂಹಲ ಕೆರಳಿಸುತ್ತಿವೆ, ಆದರೆ ಜಗತ್ತು ಈ ಮುನ್ಸೂಚನೆಗಳ ಸತ್ಯಾಸತ್ಯತೆಯನ್ನು ಕಾದು ನೋಡುತ್ತಿದೆ.
ಬಲ್ಗೇರಿಯಾದ ಭವಿಷ್ಯಗಾರ್ತಿಯಾದ ಬಾಬಾ ವಂಗಾ ಅವರು ತಮ್ಮ ಜೀವಿವಾವಧಿಯಲ್ಲಿ (1911 – 1996) ಹೇಳಿದ ಅನೇಕ ವಿಚಾರಗಳು ಈಗಲೂ ನಿಜವಾಗುತ್ತಿವೆ. 2025 ವರ್ಷಪೂರ್ತಿ ಏನೇನು ಆಗಬಹುದು ಎಂದು ಮೊದಲೇ ಊಹಿಸಿದ್ದರು. ಯುದ್ಧಗಳು, ನೈಸರ್ಗಿಕ ವಿಕೋಪಗಳು, ಸಾಂಕ್ರಾಮಿಕ ರೋಗಗಳು, ಆರ್ಥಿಕ ವ್ಯವಸ್ಥೆಯ ಬಗ್ಗೆ ಅವರು ಹೇಳಿದ್ದೆಲ್ಲವೂ ಸತ್ಯವಾಗುತ್ತಿದೆ. ಕೊರೊನಾದಂಥ ಸಾಂಕ್ರಾಮಿಕ ರೋಗದ ಬಗ್ಗೆ, 1990ರ ದಶಕದ ಕೊಲ್ಲಿ ಯುದ್ಧದ ಬಗ್ಗೆ, ಅನೇಕ ನೈಸರ್ಗಿಕ ಪ್ರಕೋಪಗಳ ಬಗ್ಗೆ ಅವರು ನುಡಿದ್ದ ಭವಿಷ್ಯವಾಣಿಗಳು ನಿಜವಾಗಿವೆ.
ದಶಕಗಳಿಂದ ಕೂಡಾ ಜನರು ಬಲ್ಗೇರಿಯನ್‌ನ ದೃಷ್ಟಿಹೀನ, ಬಾಬಾ ವಂಗಾ ಅವರ ಭವಿಷ್ಯಗಳ ಬಗ್ಗೆ ಆಕರ್ಷಿತರಾಗಿದ್ದಾರೆ ಮತ್ತು ಅಷ್ಟೇ ಸತ್ಯ, ಭಯಭೀತರೂ ಆಗಿದ್ದಾರೆ. ಯಾಕೆಂದ್ರೆ ಅವರು ವಿಶ್ವದಲ್ಲಿ ನಡೆಯುವ ಘಟನೆಗಳನ್ನು ಮುನ್ಸೂಚಿಸುವ ವಿಶಿಷ್ಟ ಸಾಮರ್ಥ್ಯಕ್ಕೆ ಹೆಸರುವಾಸಿಯಾದವರು. ಇನ್ನು ಹಲವರು ಅವರು ನುಡಿದಿರುವ ಭವಿಷ್ಯಗಳ ಬಗ್ಗೆ ಸಂದೇಹವನ್ನೂ ಪಡುತ್ತಾರೆ.
ಬಾಬಾ ವಂಗಾ ಅವರ 2025 ರ ಮುನ್ಸೂಚನೆಗಳು ಈಗ ಚರ್ಚೆಗೆ ಒಳಪಡುತ್ತಿವೆ. ವಿಶೇಷವಾಗಿ ಯುದ್ಧ, ಆರ್ಥಿಕ ಕುಸಿತ ಮತ್ತು ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿ ಅವರು ಈ ವರ್ಷ ಭವಿಷ್ಯ ನುಡಿದಿದ್ದಾರೆ. ಹವಾಮಾನದ ಕುರಿತು ಕೆಟ್ಟಸುದ್ದಿ ಸಿಗಬಹುದೆಂದೂ ಅವರು ಹೇಳಿದ್ದರು.