ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕಾ-ಇರಾನ್ ಉದ್ವಿಗ್ನತೆ ತೀವ್ರ

ದುಬೈ: ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಇರಾನ್‌ಗೆ ಸೇರಿದ ಇನ್ನೆರಡು ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕಾ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಅಮೆರಿಕಾ ಸೇನೆಯ ಪ್ರಕಾರ, ಈ ಟ್ಯಾಂಕರ್‌ಗಳು ಅಮೆರಿಕಾದ ನಿರ್ಬಂಧಗಳನ್ನು ಉಲ್ಲಂಘಿಸಿ ಇರಾನ್ ಬಂದರುಗಳಿಗೆ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದವು. ದಾಳಿಗೆ ಸಂಬಂಧಿಸಿದ ವೀಡಿಯೋಗಳನ್ನೂ ಅಮೆರಿಕಾ ಬಿಡುಗಡೆ ಮಾಡಿದೆ.


ಇದೇ ವೇಳೆ, ಗುರುವಾರ ರಾತ್ರಿ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕಾದ ನೌಕಾಪಡೆಯ ಮೂರು ಹಡಗುಗಳ ಮೇಲೆ ಇರಾನ್ ದಾಳಿ ನಡೆಸಲು ಯತ್ನಿಸಿತ್ತು ಎಂದು ಅಮೆರಿಕಾ ಆರೋಪಿಸಿದೆ. ಈ ದಾಳಿಯನ್ನು ತಡೆದ ಬಳಿಕ ಇರಾನ್‌ನ ಸೈನಿಕ ನೆಲೆಗಳ ಮೇಲೂ ಪ್ರತಿದಾಳಿ ನಡೆಸಲಾಗಿದೆ ಎಂದು ಅಮೆರಿಕಾ ತಿಳಿಸಿದೆ. ಘಟನೆಯಲ್ಲಿ ಯಾವುದೇ ಅಮೆರಿಕಾದ ಯುದ್ಧ ಹಡಗುಗಳಿಗೆ ಹಾನಿಯಾಗಿಲ್ಲ ಎಂದು ಸೇನೆ ಸ್ಪಷ್ಟಪಡಿಸಿದೆ.


ಇನ್ನೊಂದೆಡೆ, ಇರಾನ್ ಉಡಾಯಿಸಿದ್ದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಮೂರು ಡ್ರೋನ್ ದಾಳಿಗಳನ್ನು ತಡೆಯಲು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಯುಎಇ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಫೆಬ್ರವರಿ 28ರಂದು ಅಮೆರಿಕಾ ಮತ್ತು ಇಸ್ರೇಲ್ ಆರಂಭಿಸಿದ ಯುದ್ಧದ ಬಳಿಕ ಇರಾನ್ ಹಾರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಕಠಿಣಗೊಳಿಸಿದೆ. ಇದರ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರೀ ಅಸ್ಥಿರತೆ ಉಂಟಾಗಿದ್ದು, ಜಗತ್ತಿನ ತೈಲ ಹಾಗೂ ಅನಿಲ ಸಾಗಣೆಗೆ ಅತ್ಯಂತ ಪ್ರಮುಖವಾದ ಈ ಜಲಮಾರ್ಗದಲ್ಲಿ ಸಾಗಾಟಕ್ಕೂ ತೀವ್ರ ಅಡ್ಡಿಪಡಿಗಳು ಎದುರಾಗಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!