ಮಂಗಳೂರು: ಮತದಾನವು ಪ್ರತಿಯೊಬ್ಬ ನಾಗರಿಕನ ಪವಿತ್ರ ಹಕ್ಕಾಗಿದ್ದು, ಈ ಹಕ್ಕು ಯಾವುದೇ ತೊಂದರೆಯಾಗದಂತೆ ಎಲ್ಲ ಅರ್ಹ ಮತದಾರರಿಗೆ ತಲುಪಿಸಲು ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಳೆದ ಹಲವು ದಿನಗಳಿಂದ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ)ಗಳು ಮನೆಗಳಿಗೆ ಭೇಟಿ ನೀಡಿದಾಗ ಅವರಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಬಿಎಲ್‌ಒಗಳು ನೀಡುವ ಎನ್ಯುಮರೇಷನ್ ಫಾರ್ಮ್ (ಮತದಾರರ ಪಟ್ಟಿ ಪರಿಷ್ಕರಣೆ ನಮೂನೆ) ಅನ್ನು ಆದಷ್ಟು ಬೇಗ ಸರಿಯಾಗಿ ಭರ್ತಿ ಮಾಡಿ, ಒಂದು ವಾರದೊಳಗೆ ಸಂಬಂಧಪಟ್ಟ ಬಿಎಲ್‌ಒಗಳಿಗೆ ಹಿಂದಿರುಗಿಸುವಂತೆ ಅವರು ಕೋರಿದ್ದಾರೆ.
ಸಾರ್ವಜನಿಕರು ನೀಡುವ ಈ ಸಹಕಾರದಿಂದ ಮತದಾನದ ಹಕ್ಕು ಯಾವುದೇ ಅಡಚಣೆಯಿಲ್ಲದೆ ಖಾತರಿಯಾಗಲು ಸಾಧ್ಯವಾಗುತ್ತದೆ. ಜವಾಬ್ದಾರಿಯುತ ನಾಗರಿಕರಾಗಿ ಚುನಾವಣಾ ಅಧಿಕಾರಿಗಳೊಂದಿಗೆ ಕೈಜೋಡಿಸಿ, ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಮನವಿ ಮಾಡಿದ್ದಾರೆ


