ಮಂಜೇಶ್ವರ: ಶಾಂತಿಯುತ ವಾತಾವರಣವಿರುವ ಪ್ರದೇಶದಲ್ಲಿ ಉದ್ದೇಶಪೂರ್ವಕವಾಗಿ ಸಂಘರ್ಷದ ಪರಿಸ್ಥಿತಿ ಸೃಷ್ಟಿಸಲು ಯೂತ್ ಲೀಗ್ ಕಾರ್ಯಕರ್ತರು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದ್ದಾರೆ.
ವರ್ಷಗಳಿಂದ ಗಣೇಶೋತ್ಸವ ನಡೆಯುತ್ತಿರುವ ಸ್ಥಳದಲ್ಲಿ ಉತ್ಸವದ ಅಂಗವಾಗಿ ತಾತ್ಕಾಲಿಕ ಪೆಂಡಾಲ್ ನಿರ್ಮಿಸಿರುವುದನ್ನು ನೆಪವಾಗಿಸಿಕೊಂಡು ಮುಸ್ಲಿಂ ಲೀಗ್ ಕಾರ್ಯಕರ್ತರು ಅನಗತ್ಯ ಗದ್ದಲ ಸೃಷ್ಟಿಸಿ ಸಂಘರ್ಷಕ್ಕೆ ಪ್ರಚೋದನೆ ನೀಡಲು ಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಕಾರ್ಯಕರ್ತ ಲೋಕೇಶ್ ನೊಂಡಾ ಅವರ ಮೇಲೆ ದಾಳಿ ನಡೆಸಲು ಯತ್ನಿಸಿರುವ ಘಟನೆ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅವರು ಹೇಳಿದರು.

ಪ್ರದೇಶದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿ ಅಥವಾ ಬೆದರಿಕೆ ಹಾಕುವ ಹಾಗೂ ಪ್ರಚೋದನಕಾರಿ ಚಟುವಟಿಕೆಗಳ ಮೂಲಕ ಸಂಘರ್ಷ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಲೋಕೇಶ್ ನೊಂಡಾ ಅವರ ಮೇಲಿನ ದಾಳಿ ಯತ್ನದ ಕುರಿತು ಸಮಗ್ರ ತನಿಖೆ ನಡೆಸಿ, ದಾಳಿ ಯತ್ನ, ಬೆದರಿಕೆ ಹಾಗೂ ಸಂಘರ್ಷಕ್ಕೆ ಕಾರಣವಾಗುವ ಪ್ರಚೋದನಕಾರಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕಾನೂನುಬದ್ಧ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಸ್ಥಳೀಯ ಶಾಂತಿಯುತ ವಾತಾವರಣವನ್ನು ಹಾಳು ಮಾಡುವ ಪ್ರಯತ್ನಗಳಿಂದ ಮುಸ್ಲಿಂ ಲೀಗ್ ನಾಯಕತ್ವ ಹಿಂದೆ ಸರಿಯಬೇಕು. ಜನರಲ್ಲಿ ಭಿನ್ನಾಭಿಪ್ರಾಯ ಮತ್ತು ಸಂಘರ್ಷ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕವಾಗಿ ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು ಎಂದು ಎಂ.ಎಲ್. ಅಶ್ವಿನಿ ಎಚ್ಚರಿಕೆ ನೀಡಿದರು.’

