ಮಂಜೇಶ್ವರದಲ್ಲಿ ವೈಭವದ ಗಣೇಶೋತ್ಸವ: ಮಹಾಗಣಪತಿ ಜಲಸ್ಥಂಭನ ಮೆರವಣಿಗೆ

ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ 46ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಮಹಾಗಣಪತಿ ದೇವರ ಜಲಸ್ಥಂಭನ ಮೆರವಣಿಗೆ ಭಕ್ತಿ ಹಾಗೂ ಸಂಭ್ರಮದಿಂದ ನಡೆಯಿತು.

ಗಣಹೋಮ , ಭಜನೆ ಹಾಗೂ ವಿಶೇಷ ಸಂಗೀತ ಸ್ವರ ಸಂಗಮ ಕಾರ್ಯಕ್ರಮ ,ಧಾರ್ಮಿಕ ವಿಧಿವಿಧಾನಗಳ ಬಳಿಕ ಮಹಾಗಣಪತಿ ದೇವರ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಮೆರವಣಿಗೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಣಪತಿಯ ನಾಮಸ್ಮರಣೆ ಮಾಡಿದರು.

ಪಂಚವಾದ್ಯ , ಸ್ತಬ್ಧಚಿತ್ರಗಳು ಹಾಗೂ ವಿವಿಧ ಕಲಾ ಪ್ರದರ್ಶನಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು. ಮಾರ್ಗದುದ್ದಕ್ಕೂ ಭಕ್ತರು ಹಾಗೂ ಸಾರ್ವಜನಿಕರು ಸೇರಿ ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಹೊಸಂಗಡಿ ಜಂಕ್ಷನ್‌ನಲ್ಲಿ ನಡೆದ ಅದ್ಧೂರಿ ಸುಡುಮದ್ದು ಪ್ರದರ್ಶನ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ಬಣ್ಣಬಣ್ಣದ ಸುಡುಮದ್ದುಗಳ ಚಿತ್ತಾರವನ್ನು ಸಾರ್ವಜನಿಕರು ಉತ್ಸಾಹದಿಂದ ವೀಕ್ಷಿಸಿದರು.

ಮೆರವಣಿಗೆ ಮುಂದೆ ಸಾಗಿ ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನ , ಶ್ರೀ ಪಾರ್ಶ್ವನಾಥ ಬಸದಿ , ಶ್ರೀ ಚತುರ್ಮುಖ ಬಸದಿ , ಕನಿಲ ಶ್ರೀ ಭಗವತೀ ಭಂಡಾರ ನಿಲಯ , ಶ್ರೀ ಮಲರಾಯ ದೈವಸ್ಥಾನ , ಶ್ರೀ ಶಾಂತಾದುರ್ಗಾ ಮಂಗೇಶ ದೇವಸ್ಥಾನ ಅನಂತೇಶ್ವರ ದೇವಸ್ಥಾನದ ವತಿಯಿಂದ ಭಕ್ತರು ಹಾಗೂ ಸಾರ್ವಜನಿಕರಿಗೆ ಸೇವಾಭಾವದಿಂದ ಉಪಹಾರ ಹಾಗೂ ಪಾನೀಯಗಳನ್ನು ನೀಡಲಾಯಿತು.

ಮುಂದೆ ಶ್ರೀ ನಿತ್ಯಾನಂದ ಮಂದಿರ , ಶ್ರೀ ಶನೈಶ್ಚರ ಮಂದಿರ , ಶ್ರೀ ಕೀರ್ತೇಶ್ವರ ದೇವಸ್ಥಾನ , ಶ್ರೀ ಶಾಸ್ತವೇಶ್ವರ ದೇವಸ್ಥಾನ , ಉದ್ಯಾವರ ಶ್ರೀ ಭಗವತೀ ಕ್ಷೇತ್ರ , ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರ ಮಾಡದ ಬಳಿಯಿಂದ ಸಾಗಿ ಬೋವಿ ಸಮಾಜದ ಹತ್ತು ಸಮಸ್ತರ ನೇತೃತ್ವದಲ್ಲಿ ಕಣ್ವತೀರ್ಥ ಶ್ರೀ ರಾಮ ಸಮುದ್ರದಲ್ಲಿ ಮಹಾಗಣಪತಿ ದೇವರ ಜಲಸ್ಥಂಭನ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.

ಈ ಮೂಲಕ ಮಂಜೇಶ್ವರದಲ್ಲಿ ಹಲವು ದಿನಗಳಿಂದ ನಡೆದ ಗಣೇಶೋತ್ಸವದ ಭಕ್ತಿ -ಸಂಭ್ರಮ ಹಾಗೂ ಶ್ರದ್ಧೆಯೊಂದಿಗೆ ಸಂಪನ್ನಗೊಂಡಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!