ಮಂಜೇಶ್ವರ: ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕೇರಳ–ಕರ್ನಾಟಕ ಗಡಿ ಪ್ರದೇಶ ಮಂಜೇಶ್ವರದ ಉದ್ಯಾವರದ ಪ್ರತಿಭೆ ಕ್ಷಮಾ ರವೀಂದ್ರ ಅವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಅ.9ರವರೆಗೆ ನಡೆಯಲಿರುವ ‘Women of the Universe 2026’ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಯಾವರ ನಿವಾಸಿ ರವೀಂದ್ರ ಕೆ.ಎಚ್. ಮತ್ತು ಕುಶಾಲ ಆರ್. ದಂಪತಿಯ ಪುತ್ರಿಯಾಗಿರುವ ಕ್ಷಮಾ ರವೀಂದ್ರ ಅವರು ಮಂಜೇಶ್ವರದಲ್ಲಿ ಹುಟ್ಟಿ ಬೆಳೆದವರು. ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಂಜೇಶ್ವರದ ಉದಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರೈಸಿದ ಅವರು, ಬಳಿಕ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಪದವಿಪೂರ್ವ ಹಾಗೂ ಪದವಿ ಶಿಕ್ಷಣವನ್ನು ಮುಂದುವರಿಸಿದರು. ಬಿಎಸ್ಸಿ ಪದವೀಧರೆಯಾಗಿರುವ ಕ್ಷಮಾ ಅವರು ಶಿಕ್ಷಣದ ಅವಧಿಯಲ್ಲೇ ಕೇರಳ ಮತ್ತು ಕರ್ನಾಟಕದ ಗಡಿ ಪ್ರದೇಶದ ಸಾಂಸ್ಕೃತಿಕ ಹಾಗೂ ಸಾಮಾಜಿಕ ವಾತಾವರಣದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಸುಮಾರು 12 ವರ್ಷಗಳ ಕಾಲ ಜಿಸಿಸಿ ರಾಷ್ಟ್ರಗಳಲ್ಲಿ ವಾಸವಾಗಿದ್ದ ಅವರು, ವಿವಿಧ ಅನುಭವಗಳನ್ನು ಪಡೆದುಕೊಂಡು ಬಳಿಕ ಮಂಗಳೂರಿಗೆ ಮರಳಿದರು. ಪ್ರಸ್ತುತ ಮಂಗಳೂರಿನ ಎಂಪೈರ್ ಮಾಲ್ ಕಟ್ಟಡದಲ್ಲಿ ‘ಸೋಲೋ ಹೀಲಿಂಗ್ ಸೆಂಟರ್’ನ ಮಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹೋಲಿಸ್ಟಿಕ್ ಹೀಲಿಂಗ್ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶನದ ಮೂಲಕ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ಮಾಡೆಲಿಂಗ್ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ಕ್ಷಮಾ ರವೀಂದ್ರ ಅವರು ‘ಮಿಸೆಸ್ ಇಂಡಿಯಾ ಕ್ಲೀನ್ ಆಫ್ ಸಬ್‌ಸೈನ್ಸ್’ ಸ್ಪರ್ಧೆಯ ಮೂಲಕ ತಮ್ಮ ಮಾಡೆಲಿಂಗ್ ಪಯಣ ಆರಂಭಿಸಿದರು. ಸ್ಪರ್ಧೆಯಲ್ಲಿ ಫಸ್ಟ್ ರನ್ನರ್ ಅಪ್ ಸ್ಥಾನ ಗಳಿಸುವ ಮೂಲಕ ಗಮನ ಸೆಳೆದ ಅವರು, ‘ಬ್ಯೂಟಿ ವಿದ್ ಪರ್ಪಸ್’ ಪ್ರಶಸ್ತಿಯನ್ನೂ ಪಡೆದುಕೊಂಡರು. ಸೌಂದರ್ಯವನ್ನು ಕೇವಲ ಬಾಹ್ಯ ರೂಪಕ್ಕೆ ಸೀಮಿತಗೊಳಿಸದೆ, ಅದನ್ನು ಸಮಾಜಮುಖಿ ಉದ್ದೇಶ ಹಾಗೂ ಸೇವೆಯೊಂದಿಗೆ ಜೋಡಿಸುವ ಅವರ ಚಿಂತನೆ ಈ ಸಾಧನೆಗೆ ಮತ್ತಷ್ಟು ಮೆರುಗು ನೀಡಿತು.
ಈ ಸಾಧನೆಯ ಬಳಿಕ ಅಂತಾರಾಷ್ಟ್ರೀಯ ಮಟ್ಟದ ‘Women of the Universe 2026’ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಕ್ಷಮಾ ರವೀಂದ್ರ ಅವರಿಗೆ ದೊರೆತಿದೆ. ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ಭಾರತದ ಪ್ರತಿನಿಧಿಯಾಗಿ ಕ್ಷಮಾ ಅವರು ತಮ್ಮ ಪ್ರತಿಭೆ, ವ್ಯಕ್ತಿತ್ವ, ಸಾಮಾಜಿಕ ಬದ್ಧತೆ ಹಾಗೂ ಸೇವಾ ಮನೋಭಾವವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪರಿಚಯಿಸಲಿದ್ದಾರೆ.

ಹೋಲಿಸ್ಟಿಕ್ ಹೀಲರ್, ಮಾಡೆಲ್ ಹಾಗೂ ‘ಅಕಾನ್ಸಿಯಾ ಫೌಂಡೇಶನ್’ ಸಂಸ್ಥಾಪಕಿಯಾಗಿರುವ ಕ್ಷಮಾ ರವೀಂದ್ರ ಅವರು ಹೋಲಿಸ್ಟಿಕ್ ಹೀಲಿಂಗ್, ಆಧ್ಯಾತ್ಮಿಕ ಮಾರ್ಗದರ್ಶನ, ಎನರ್ಜಿ ಹೀಲಿಂಗ್, ಟ್ಯಾರೋ ಹಾಗೂ ಆಕಾಶಿಕ್ ರೆಕಾರ್ಡ್ ರೀಡಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಕ್ಷೇಮವನ್ನು ಸಮಗ್ರವಾಗಿ ನೋಡುವ ಉದ್ದೇಶದಿಂದ ತಮ್ಮ ಕಾರ್ಯಚಟುವಟಿಕೆಗಳನ್ನು ರೂಪಿಸಿಕೊಂಡಿದ್ದಾರೆ.
ಅವರ ನೇತೃತ್ವದ ‘ಅಕಾನ್ಸಿಯಾ ಫೌಂಡೇಶನ್’ ಭಾವನಾತ್ಮಕ ಕ್ಷೇಮ, ಆಂತರಿಕ ಸ್ವಾತಂತ್ರ್ಯ, ಕರುಣೆ ಹಾಗೂ ಜಾಗೃತ ಜೀವನಶೈಲಿಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ವ್ಯಕ್ತಿಯೊಳಗಿನ ಸಾಮರ್ಥ್ಯವನ್ನು ಅರಿತುಕೊಳ್ಳಲು, ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಹಾಗೂ ಸಕಾರಾತ್ಮಕ ಜೀವನದತ್ತ ಹೆಜ್ಜೆ ಇಡಲು ಮಾರ್ಗದರ್ಶನ ನೀಡುವ ಕಾರ್ಯಗಳಲ್ಲಿಯೂ ಸಂಸ್ಥೆ ತೊಡಗಿಸಿಕೊಂಡಿದೆ.

ಗಡಿ ಪ್ರದೇಶದ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಕ್ಷಮಾ ರವೀಂದ್ರ ಅವರು ಶಿಕ್ಷಣ, ವೃತ್ತಿ, ಹೀಲಿಂಗ್ ಕ್ಷೇತ್ರ ಹಾಗೂ ಮಾಡೆಲಿಂಗ್‌ನಲ್ಲಿ ತಮ್ಮದೇ ಆದ ಗುರುತನ್ನು ನಿರ್ಮಿಸಿಕೊಂಡು ಇದೀಗ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಹಂತಕ್ಕೆ ತಲುಪಿರುವುದು ಮಂಜೇಶ್ವರ ಹಾಗೂ ಕರಾವಳಿ ಭಾಗದ ಜನರಲ್ಲಿ ಹೆಮ್ಮೆಯ ಭಾವನೆ ಮೂಡಿಸಿದೆ.
‘ಸೌಂದರ್ಯದೊಂದಿಗೆ ಉದ್ದೇಶ, ಆಧ್ಯಾತ್ಮಿಕತೆಯೊಂದಿಗೆ ಶಕ್ತಿ ಹಾಗೂ ಯಶಸ್ಸಿನೊಂದಿಗೆ ಸೇವೆ ಎಂಬ ಸಂದೇಶದೊಂದಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವುದು ನನ್ನ ಪಾಲಿಗೆ ಹೆಮ್ಮೆಯ ಸಂಗತಿ. ನನ್ನ ಪ್ರಯಾಣದ ಮೂಲಕ ಸೌಂದರ್ಯ ಮತ್ತು ಯಶಸ್ಸು ಸಮಾಜಕ್ಕೆ ಕೊಡುಗೆ ನೀಡುವ ಜವಾಬ್ದಾರಿಯೊಂದಿಗೆ ಸಾಗಬೇಕು ಎಂಬ ಸಂದೇಶವನ್ನು ಸಾರಲು ಬಯಸುತ್ತೇನೆ’ ಎಂದು ಕ್ಷಮಾ ರವೀಂದ್ರ ತಿಳಿಸಿದ್ದಾರೆ.
ಮಂಜೇಶ್ವರದ ಗಡಿ ಪ್ರದೇಶದಿಂದ ಆರಂಭವಾದ ಅವರ ಪಯಣ ಇದೀಗ ದಕ್ಷಿಣ ಕೊರಿಯಾದ ಸಿಯೋಲ್‌ನ ಅಂತಾರಾಷ್ಟ್ರೀಯ ವೇದಿಕೆಯವರೆಗೆ ತಲುಪಿದ್ದು, ‘Women of the Universe 2026’ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ಷಮಾ ರವೀಂದ್ರ ಅವರ ಸಾಧನೆಯತ್ತ ಇದೀಗ ಕರಾವಳಿಯ ಜನರ ಗಮನ ನೆಟ್ಟಿದೆ.

