ಮಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ತನ್ನ 27 ನೇ ಎಂಎಂಎ-ಕೆವಿಕೆ ಅತ್ಯುತ್ತಮ ವ್ಯವಸ್ಥಾಪಕ ಪ್ರಶಸ್ತಿ – 2025 ಪ್ರಧಾನ ಕಾರ್ಯಕ್ರಮವು ಮಾರ್ಚ್ 28 ರಂದು ಎಸ್‌ಡಿಎಂ ಕಾಲೇಜಿನ ಸಭಾಂಗಣದಲ್ಲಿ ಸಂಜೆ 6:00 ರಿಂದ ನಡೆಯಲಿದ್ದು, ಪ್ರಶಸ್ತಿಯನ್ನು ದಕ್ಷಿಣ ಕೆನರಾ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಲಿಮಿಟೆಡ್ ಇದರ ಅಧ್ಯಕ್ಷರಾದ ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಇವರಿಗೆ ನೀಡಿ ಗೌರವಿಸಲಾಗುವುದೆಂದು ಮಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಇದರ ಅಧ್ಯಕ್ಷರಾದ ಎಡ್ವರ್ಡ್ ಜೆ ಕೊಯೆಲ್ಹೋ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಾರ್ಯಕ್ರಮಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 1997ರಿಂದ ಆರಂಭವಾದ ಈ ಪ್ರಶಸ್ತಿಯು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ವಿಶೇಷ ಕೊಡುಗೆ ನೀಡಿದ ಗಣ್ಯರಿಗೆ ನೀಡಲಾಗುತ್ತಾ ಬಂದಿದೆ. ಡಾ. ರಾಜೇಂದ್ರ ಕುಮಾರ್ ಅವರು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂದಿರುವ ಕ್ರಾಂತಿಕಾರಿ ಬದಲಾವಣೆ ಮತ್ತು ಅವರ ದಕ್ಷ ವ್ಯವಸ್ಥಾಪನಾ ಶೈಲಿಯನ್ನು ಗುರುತಿಸಿ ಈ ಸಾಲಿನ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಕಾರ್ಯದರ್ಶಿಗಳಾದ ಡಾ ರಮ್ಯಾ ಶೆಟ್ಟಿ , ಸದಸ್ಯರಾದ ಡಾ ಅರುಣ್ ಕುಮಾರ್ , ಜಯರಾಮ್ ಶೆಟ್ಟಿ , ಪ್ರಮೀಳಾ ಶೆಟ್ಟಿ ಉಪಸ್ಥಿತರಿದ್ದರು .