ಹೊಸಂಗಡಿ ಜಂಕ್ಷನ್: ಬಸ್‌ಗಳ ಅವೈಜ್ಞಾನಿಕ ನಿಲುಗಡೆ: ಪ್ರಯಾಣಿಕರಿಗೆ ತಪ್ಪದ ಬವಣೆ

​ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ವಾಣಿಜ್ಯ ಕೇಂದ್ರವಾದ ಹೊಸಂಗಡಿ ಜಂಕ್ಷನ್‌ನಲ್ಲಿ ಬಸ್‌ಗಳ ಅನಧಿಕೃತ ಮತ್ತು ಅವೈಜ್ಞಾನಿಕ ನಿಲುಗಡೆಯು ದಿನದಿಂದ ದಿನಕ್ಕೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದ್ದು, ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ.

​ತಲಪಾಡಿ ಭಾಗದಿಂದ ಕಾಸರಗೋಡು ಕಡೆಗೆ ಸಂಚರಿಸುವ ಬಸ್‌ಗಳು ನಿಗದಿತ ಬಸ್ ನಿಲ್ದಾಣಗಳಲ್ಲಿ ನಿಲ್ಲಿಸದೆ, ಜನಸಂದಣಿ ತುಂಬಿರುವ ಜಂಕ್ಷನ್‌ನ ಮಧ್ಯಭಾಗದಲ್ಲೇ ಹಾಗೂ ಅನೆಕಲ್ಲು ರಸ್ತೆಗೆ ತಿರುಗುವ ಜಾಗದಲ್ಲೇ ಬಸ್‌ಗಳನ್ನು ನಿಲ್ಲಿಸುತ್ತಿವೆ. ಇದರಿಂದಾಗಿ ಹಿಂದೆ ಬರುವ ವಾಹನಗಳ ಸವಾರರಿಗೆ ತೊಂದರೆಯಾಗುತ್ತಿದ್ದು, ಪದೇ ಪದೇ ಅಪಘಾತಗಳು ಸಂಭವಿಸುವ ಭೀತಿ ಎದುರಾಗಿದೆ.

​ಪ್ರಮುಖ ವೃತ್ತವಿರುವ ಈ ಜನನಿಬಿಡ ಪ್ರದೇಶದಲ್ಲಿ ಬಸ್‌ಗಳು ಅಡ್ಡಲಾಗಿ ನಿಲ್ಲುವುದರಿಂದ ನಿತ್ಯವೂ ಭಾರೀ ವಾಹನ ದಟ್ಟಣೆ ಉಂಟಾಗುತ್ತಿದೆ.

ಶಾಲಾ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಪಾದಚಾರಿಗಳು ಜೀವ ಭಯದಲ್ಲೇ ರಸ್ತೆ ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ.

​ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ವಾಹನ ನಿಲ್ಲಿಸುತ್ತಿರುವ ಬಸ್ ಚಾಲಕರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು.

ಜಂಕ್ಷನ್‌ನಲ್ಲಿ ಬಸ್‌ಗಳ ಅನಧಿಕೃತ ನಿಲುಗಡೆಯನ್ನು ತಡೆದು, ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯರು ಮತ್ತು ಪ್ರಯಾಣಿಕರು ಒತ್ತಾಯಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!